ಜಲಾನ್ವೇಷಣೆ -
ಭೂಮಿಯ ಆಳದಲ್ಲಿ ಹುದುಗಿರುವ ಜಲದ ಶೋಧನೆ. ಭೂಜಲಾನ್ವೇಷಣೆ ಎನ್ನುವುದೂ ಉಂಟು. ಇದರಲ್ಲಿ ಮುಖ್ಯವಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸುತ್ತಾರೆ : 
1.	ಭೂವೈಜ್ಞಾನಿಕ ವಿಧಾನ
2.	ಭೂಭೌತ ವಿಧಾನ
3.	ವಿದ್ಯುದ್ರೋಧ ವಿಧಾನ
4.	ಕಂಪನ ವಿಧಾನ
5.	ಗುರುತ್ವ ವಿಧಾನ 
6.	ಕಾಂತ ವಿಧಾನ
7.	ವಾಯು ಛಾಯಾಚಿತ್ರ ವಿಧಾನ
8.	ಜಲಭವಿಷ್ಯ ವಿಧಾನ

1. ಭೂವೈಜ್ಞಾನಿಕ ವಿಧಾನ : ಮೊತ್ತ ಮೊದಲು ವೀಕ್ಷಣಪ್ರದೇಶದಲ್ಲಿ ಹರಡಿರುವ ವಿವಿಧ ಶಿಲೆಗಳ ಹರವು, ಅವುಗಳ ಇಳಿವೋರೆ, ರಚನೆ, ವಿನ್ಯಾಸ. ಖನಿಜ ಸಂಯೋಜನೆಗಳ ವಿವರವಾದ ಅಧ್ಯಯನವಾಗಬೇಕು. ಶಿಲಾನಿಕ್ಷೇಪಗಳು ಹಾಗೂ ಸ್ತರಗಳ ಓಟವನ್ನು ನಕಾಶೆಯಲ್ಲಿ ಗುರುತಿಸಿ ಆ ಮೂಲಕ ಆ ಪ್ರದೇಶದ ಭೂನಕ್ಷೆಯನ್ನು ತಯಾರಿಸಬೇಕು. ಇದರ ಸಹಾಯದಿಂದ ನೆಲಮಟ್ಟದಿಂದ ಕೆಳಗೆ ಆಳದಲ್ಲಿ ಶಿಲೆಗಳು ವ್ಯಾಪಿಸಿರುವ ರೀತಿಯನ್ನು ನಿರ್ಧರಿಸಿ ಆ ಬಗೆಯ ಸನ್ನಿವೇಶ ಭೂಜಲ ದೊರೆಯಲು ಎಷ್ಟರಮಟ್ಟಿಗೆ ಅನುಕೂಲವಾಗಿದೆ ಎಂಬುದನ್ನು ಪರಿಶೀಲಿಸಬೇಕು. ಆನಂತರ ಅಲ್ಲಿರುವ ಜಲಧರದ ಮಂದ ಹಾಗೂ ವಿಸ್ತೀರ್ಣವನ್ನು ನಿರ್ಧರಿಸಬೇಕು. ಅಲ್ಲಿನ ವಾಯುಗುಣ, ವಾರ್ಷಿಕ ಮಳೆಯ ಪ್ರಮಾಣ, ಸಸ್ಯ ಸಂಪತ್ತು ಈ ಅಂಶಗಳನ್ನೂ ಪರಿಗಣಿಸಬೇಕು. ಅಲ್ಲಿಯ ವಿವಿಧ ಶಿಲೆಗಳನ್ನು ವಿವರವಾದ ಪರೀಕ್ಷೆಗೆ ಒಳಪಡಿಸಿ ಅವುಗಳ ಸರಂಧ್ರತೆ ಹಾಗೂ ವ್ಯಾಪ್ಯತಾಗುಣಮಟ್ಟವನ್ನು ನಿರ್ಧರಿಸಬೇಕು. ಇವುಗಳ ಸಹಾಯದಿಂದ ದೊರೆಯುವ ನೀರಿನ ಪ್ರಮಾಣವನ್ನು ಅಂದಾಜು ಮಾಡಲು ಸಾಧ್ಯವಾದೀತು. ಅಲ್ಲದೆ ಶೇಖರವಾಗಿರುವ ಭೂಜಲವನ್ನು ಹೊರತೆಗೆದಲ್ಲಿ ಅದು ಮತ್ತೆ ಅಲ್ಲಿ ಶೇಖರವಾಗಲು ಸಾಧ್ಯವೇ? ಅದಕ್ಕೆ ಅನುಗುಣವಾದ ಭೂಲಕ್ಷಣಗಳಿವೆಯೆ? ನೀರು ಪುನಃ ಶೇಖರವಾಗಲು ಎಷ್ಟು ಕಾಲ ಬೇಕು? ಈ ಎಲ್ಲ ಅಂಶಗಳನ್ನು ಸಂಗ್ರಹಿಸಬೇಕು. ಈ ನಿರ್ಧಾರದಲ್ಲಿ ಅಲ್ಲಿಗೆ ಸಮೀಪದಲ್ಲಿರುವ ನದಿಗಳು, ಚಿಲುಮೆಗಳು, ಬಾವಿಗಳು ನಮಗೆ ಸಾಕಷ್ಟು ಸಹಾಯಕವಾಗಬಲ್ಲವು. ಆ ಪ್ರದೇಶದಲ್ಲಿರುವ ವಿವಿಧ ಸಸ್ಯಗಳ ಅಧ್ಯಯನವೂ ಅಷ್ಟೆ ಮುಖ್ಯ. ಅದರಲ್ಲೂ ಕೆಲವು ಸಸ್ಯಗಳಂತೂ ಜಲಮಟ್ಟವಿರುವ ಆಳವನ್ನು ಪತ್ತೆಹಚ್ಚಲು ಬಲು ಸಹಾಯಕವಾಗುವುವು ಎಂಬ ಅಂಶ ನೆನಪಿನಲ್ಲಿಡಬೇಕು.

2. ಭೂಭೌತ ವಿಧಾನ : ಒಂದು ನಿರ್ದಿಷ್ಟ ಪ್ರದೇಶದಲ್ಲಿ ವ್ಯಾಪಿಸಿರುವ ವಿವಿಧ ಶಿಲೆಗಳ ಮುಖ್ಯ ಭೌತಲಕ್ಷಣಗಳ ನಿರ್ಧಾರವೇ ಇದು. ಪೆಟ್ರೋಲಿಯಮ್ ಮತ್ತು ಖನಿಜ ನಿಕ್ಷೇಪಗಳ ಅನ್ವೇಷಣೆಯಲ್ಲಿ ಇದು ಬಲು ಉತ್ತಮ ವಿಧಾನ. ಭೂಜಲಾನ್ವೇಷಣೆಗೂ ಇದನ್ನು ಅಳವಡಿಸಿಕೊಳ್ಳಲಾಗಿದೆ. ಶಿಲೆಗಳ ಸಾಂದ್ರತೆ, ಕಾಂತತ್ವ, ಪುಟಿತತೆ ಮತ್ತು ವಿದ್ಯುದ್ರೋಧ ಇವನ್ನು ಮುಖ್ಯವಾಗಿ ನಿರ್ಧರಿಸಲಾಗುವುದು. ಬಳಿಕ ಈ ಮೌಲ್ಯಗಳ ಆಧಾರದ ಮೇಲೆ ಆಳದಲ್ಲಿ ಹುದುಗಿರುವ ಶಿಲೆಗಳ ರಚನೆ, ಸಂಯೋಜನೆ, ಸರಂಧ್ರತೆ ಅವುಗಳಲ್ಲಿ ಅಡಕವಾಗಿರುವ ಭೂಜಲ ಹಾಗೂ ಅದರ ಗುಣಮಟ್ಟವನ್ನು ನಿರ್ಧರಿಸಲಾಗುವುದು. 

	3. ವಿದ್ಯುದ್ರೋಧ ವಿಧಾನ : ವಿದ್ಯುತ್ತನ್ನು ಶಿಲೆಗಳ ಮೂಲಕ ಹಾಯಿಸಿ ಅವುಗಳ ರೋಧವನ್ನು (ರೆಸಿಸ್ಟೆನ್ಸ್) ohm-m ಗಳ ಮಾನಕದಲ್ಲಿ ಅಳೆಯಲಾಗುವುದು. ಈ ಮೌಲ್ಯ ಶಿಲೆಯ ಖನಿಜ ಸಂಯೋಜನೆ, ಸಾಂದ್ರತೆ ಸರಂಧ್ರತೆ ರಂಧ್ರಗಳ ಗಾತ್ರ ಮತ್ತು ಆಕಾರ, ಅಲ್ಲಿ ಹುದುಗಿರುವ ನೀರಿನ ಮೊತ್ತ ಮತ್ತು ಅದರ ಗುಣ ಹಾಗೂ ಉಷ್ಣತೆಯನ್ನು ಅವಲಂಬಿಸಿದೆ. ಹೀಗಾಗಿ ಇದು ಎಲ್ಲ ಶಿಲೆಗಳಲ್ಲೂ ಏಕರೀತಿಯಾಗಿರಲು ಸಾಧ್ಯವೇ ಇಲ್ಲ. ಉದಾಹರಣೆಗೆ ಅಗ್ನಿ ಹಾಗೂ ರೂಪಾಂತರಿತ ಶಿಲೆಗಳಿಗೆ 102-108 ohm-m ಮೌಲ್ಯವೂ ಜಲಶಿಲೆಗಳಿಗೆ 100-104 ohm-m ಮೌಲ್ಯವೂ ಇವೆ. ಅಂದರೆ ಇದರ ಆಧಾರದ ಮೇಲೆ ಉತ್ತಮ ಜಲವಾಹಕಗಳಾದ ಜಲಜಶಿಲೆಗಳನ್ನು, ಆಳದಲ್ಲಿ ಹುದುಗಿದ್ದು ನಮಗೆ ಅಗೋಚರವಾಗಿದ್ದರೂ ಪತ್ತೆ ಮಾಡಬಹುದು. ಸರಂಧ್ರ ಶಿಲೆಗಳಲ್ಲಿ ಭೂಜಲ ಅಧಿಕ ಮೊತ್ತದಲ್ಲಿ ಅಡಕವಾಗಿರುವ ಕಾರಣ ಶಿಲೆಯ ಇತರ ಲಕ್ಷಣಗಳಿಗಿಂತ ಈ ಭೂಜಲವೇ ಅದರ ವಿದ್ಯುದ್ರೋಧ ಸಾಮಥ್ರ್ಯವನ್ನು ನಿರ್ಧರಿಸಬಲ್ಲದು. ಈ ವಿಧಾನದಲ್ಲಿ ನಿರ್ದಿಷ್ಟ ಅಂತರದಲ್ಲಿ ಎಲೆಕ್ಟ್ರೋಡುಗಳನ್ನು ನೆಲದಲ್ಲಿ ಹೂತಿಟ್ಟು ವಿದ್ಯುತ್ತನ್ನು ನೆಲದೊಳಕ್ಕೆ ಪ್ರವಹಿಸಿ ಅವುಗಳಿಗೆ ಲಗತ್ತಿಸಿರುವ ಯಂತ್ರಗಳ ಸಹಾಯದಿಂದ ಹುದುಗಿರುವ ಶಿಲೆಗಳ ರೋಧವನ್ನು ಅಳತೆ ಮಾಡಲಾಗುವುದು. ಇವುಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಎರಡು ಮುಖ್ಯ ವಿಧಾನಗಳಿವೆ.- ವೆನ್ನರ್ ವಿಧಾನ ಮತ್ತು ಷ್ಲಂಬರ್ಗರ್ ವಿಧಾನ. ಇವೆರಡಕ್ಕೂ ಇರುವ ಮುಖ್ಯ ವ್ಯತ್ಯಾಸ ಎಲೆಕ್ಟ್ರೋಡುಗಳ ಜೋಡಣೆಗಳ ಕ್ರಮದಲ್ಲಿ ಮಾತ್ರವೇ ವಿನಾ ಮೂಲಭೂತ ಲಕ್ಷಣದಲ್ಲಿ ಅಲ್ಲ. ವಿವಿಧ ಅಂತರಗಳಲ್ಲಿ ಹಲವಾರು ಬಾರಿ ವಿದ್ಯುತ್ತನ್ನು ಪ್ರವಹಿಸಿ ನೆಲದ ಆಳದಲ್ಲಿರುವ ಶಿಲೆಗಳ ರೋಧವನ್ನು ನಿರ್ಧರಿಸುತ್ತಾರೆ. ಈ ಮೌಲ್ಯಗಳ ಸಹಾಯದಿಂದ ರೇಖಾನಕ್ಷೆಗಳನ್ನು ತಯಾರಿಸಿ ತನ್ಮೂಲಕ ಭೂಜಲದ ಮೊತ್ತ, ನೀರಿನ ಲವಣತೆ ಜಲವಾಹಕದ ವಿಸ್ತೀರ್ಣ, ಅದು ಹುದುಗಿರುವ ಆಳ ಇತ್ಯಾದಿಗಳನ್ನು ನಿರ್ಧರಿಸಲಾಗುವುದು. ಸದ್ಯದಲ್ಲಿ ಈ ವಿಧಾನವೇ ಹೆಚ್ಚು ಬಳಕೆಯಲ್ಲಿದೆ. ಏಕೆಂದರೆ ಇಲ್ಲಿ ಬಳಸುವ ಉಪಕರಣಗಳು ಅಷ್ಟು ಕ್ಲಿಷ್ಟವಾಗಿರದೆ ಅವನ್ನು ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಒಯ್ಯಬಹುದು. ಅಲ್ಲದೆ ಅನೇಕ ಪ್ರದೇಶಗಳಲ್ಲಿ ಈ ವಿಧಾನವನ್ನು ಅನುಸರಿಸಿ ಉತ್ತಮ ಫಲಿತಾಂಶಗಳನ್ನು ಪಡೆದಿರುವುದು ಗಮನಾರ್ಹ. 

	4. ಕಂಪನ ವಿಧಾನ : ಈ ವಿಧಾನದಲ್ಲಿ ಕೃತಕ ಭೂಕಂಪನವನ್ನು ಸೃಜಿಸಿ ಅದರಿಂದ ಉದ್ಭವಿಸಿದ ಕಂಪನಗಳು ಆ ನೆಲಭಾಗದ ಆಳದಲ್ಲಿ ಪ್ರವಹಿಸುವಂತೆ ಮಾಡಿದಾಗ ಅವು ಅಲ್ಲಿ ಹುದುಗಿರುವ ವಿವಿಧ ಶಿಲೆಗಳ ಮೂಲಕ ಹಾದು ಮತ್ತೆ ನೆಲ ಮಟ್ಟವನ್ನೇ ಮುಟ್ಟುತ್ತವೆ. ಕಂಪನಗಳು ಬೆಳಕಿನ ಅಲೆಗಳೋಪಾದಿಯಲ್ಲಿ ನೆಲಭಾಗದಲ್ಲಿ ಪ್ರವಹಿಸುತ್ತವೆ. ಈ ಪ್ರಸರಣ ಸಾಮಥ್ರ್ಯ ಎಲ್ಲ ಶಿಲೆಗಳಲ್ಲೂ ಒಂದೇ ರೀತಿಯಾಗಿಲ್ಲ. ಹೀಗಾಗಿ ಇವು ಪ್ರವಹಿಸುವ ವೇಗ, ಪ್ರವಹಿಸಲು ಬೇಕಾಗುವ ಕಾಲ ಈ ಅಂಶಗಳನ್ನೆಲ್ಲ ಸೂಕ್ತವಾದ ಯಂತ್ರಗಳ ಮೂಲಕ ಅಳೆಯಲಾಗುವುದು. ಇವು ಸಹ ಬೆಳಕಿನ ಅಲೆಗಳಂತೆ ಪ್ರತಿಫಲನ ಹಾಗೂ ವಕ್ರೀಭವನ ನಿಯಮಗಳಿಗೆ ಒಳಗಾಗಿವೆ. ಇವುಗಳಲ್ಲಿ ಪ್ರತಿಫಲನ ವಿಧಾನಗಳು ನೂರೂರು ಮೀಟರ್‍ಗಳ ಆಳದಲ್ಲಿ ಹುದುಗಿರುವ ಭೂಭಾಗಗಳ ವಿನ್ಯಾಸವನ್ನು ಅರಿಯಲು ಸಹಾಯಕವಾದರೆ ವಕ್ರೀಭವನ ವಿಧಾನಗಳು ಸುಮಾರು 30ಮೀಟರ್ ಆಳದ ಭೂವಿನ್ಯಾಸವನ್ನು ಸೂಚಿಸಬಲ್ಲವು. ಹೀಗಾಗಿ ಇವು ಭೂಜಲದ ನಿರ್ಧರಣೆಯಲ್ಲಿ ಹೆಚ್ಚು ಅನುಕೂಲಕರವಾಗಿವೆ. ಅಳ್ಳಕ ರಚನೆಯ ಜಲವಾಹಕ ಶಿಲೆಗಳಲ್ಲಿ ಕಂಪನದ ಅಲೆಗಳ ಪ್ರವಾಹವೇಗ ಪ್ರತಿ ಸೆಕೆಂಡಿಗೆ 910'ಮೀ-1820'ಮೀಗಳಷ್ಟೂ ಜಲವಾಹಕ ಶಿಲೆಗಳಲ್ಲಿ ಈ ವೇಗ ಹೆಚ್ಚಾಗಿದ್ದು ಪ್ರತಿ ಸೆಕೆಂಡಿಗೆ 1820'ಮೀ-3033'ಮೀ ಪ್ರಮಾಣದಲ್ಲೂ ಕಂಡುಬಂದಿದೆ. ಅಡಕವಾದ ರಚನೆಯ ಅಗ್ನಿ ಶಿಲೆಯೇ ಮುಂತಾದವುಗಳಲ್ಲಿ ಈ ವೇಗ ಇನ್ನೂ ಅಧಿಕ. ವೀಕ್ಷಣಕಾರ್ಯಕ್ಕೆ ಯೋಗ್ಯವಾದ ನೆಲಭಾಗವನ್ನು ಮೊದಲು ಆಯಬೇಕು. ಅಲ್ಲಿ 3'-5'ಮೀ ಗುಳಿಯನ್ನು ತೋಡಿ ಸುಮಾರು ಒಂದು ಪೌಂಡಿನಷ್ಟು ಸಿಡಿಮದ್ದನ್ನು ತುಂಬಿ ಮುಚ್ಚಬೇಕು. ಇದರ ಎರಡೂ ಕಡೆಗಳಲ್ಲಿ ನೇರ ಗೆರೆಗಳನ್ನು ಎಳೆದು ಅವುಗಳ ಉದ್ದಕ್ಕೂ 3'-5'ಮೀ ಅಂತರಗಳಲ್ಲಿ ಕಂಪನಮಾಪಕ ಸಲಕರಣೆಗಳನ್ನಿಟ್ಟು ಮದ್ದನ್ನು ಸಿಡಿಸಬೇಕು. ಇವುಗಳ ಮೂಲಕ ಕಂಪನದ ಅಲೆಗಳು ಹಾದು ವಿದ್ಯುತ್ತಾಗಿ ಮಾರ್ಪಡುತ್ತವೆ. ಎಲ್ಲ ಕಂಪನ ಮಾಪಕಗಳನ್ನೂ ಪ್ರವರ್ಧಕ (ಆ್ಯಂಪ್ಲಿಫೈಯರ್) ಮತ್ತು ಲೇಖನಾಂದೋಳನ ಲೇಖಿಗೆ (ರಿಕಾರ್ಡಿಂಗ್ ಆಸಿಲೋಗ್ರಾಫ್) ಸಂಪರ್ಕಿಸಲಾಗಿದೆ. ಈ ಸಲಕರಣೆಗಳು ಕಂಪನಗಳ ಮೌಲ್ಯಗಳನ್ನು ಸೂಚಿಸುತ್ತವೆ. ಇವುಗಳ ಸಹಾಯದಿಂದ ನಕ್ಷೆಗಳನ್ನು ತಯಾರಿಸಿ ಭೂಜಲ ಅಡಕವಾಗಿರುವ ಜಲಧರದ ಆಳ, ಜಲಮಟ್ಟದ ಆಳ, ಜಲವ್ಯಾಪಿಸಿರುವ ರೀತಿ, ಜಲಧರದ ವಿಸ್ತೀರ್ಣ ಮುಂತಾದ ಅಂಶಗಳನ್ನು ನಿರ್ಧರಿಸಬಹುದು. ಈ ವಿಧಾನವನ್ನು ಅನುಸರಿಸಿ 61ಮೀ-91ಮೀ ಆಳದ ವ್ಯಾಪ್ತಿಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವುದು ಸಾಧ್ಯ. ಬಹುಶಃ ಸುಮಾರು 2,000ಮೀ ಆಳದವರೆಗೂ ಇದು ಸಹಾಯಕವಾಗಬಲ್ಲದು. ಇನ್ನೂ ಹೆಚ್ಚಿನ ಆಳಕ್ಕೆ ಹೋದಲ್ಲಿ ಇದು ಅಷ್ಟು ಉಪಯುಕ್ತವೆನಿಸಲಾರದು. ಅಲ್ಲದೆ ಈ ವಿಧಾನಕ್ಕೆ ಹೆಚ್ಚಿನ ಬೆಲೆಯ ಸಲಕರಣೆಗಳು ಹಾಗೂ ಅವನ್ನು ಉಪಯೋಗಿಸಬಲ್ಲ ಕುಶಲ ತಜ್ಞರೂ ಅತ್ಯಾವಶ್ಯಕ. ಹೀಗಾಗಿ ಇದರ ಬಳಕೆ ಅಷ್ಟಾಗಿಲ್ಲ. 

	5. ಗುರುತ್ವ ವಿಧಾನ : ಇದನ್ನು ಅನುಸರಿಸಿ ಒಂದು ಪ್ರದೇಶದಲ್ಲಿರುವ ವಿವಿಧ ಶಿಲೆಗಳ ಸಾಂದ್ರತಾ ಲಕ್ಷಣಗಳನ್ನು ನಿರ್ಧರಿಸಲಾಗುವುದು. ಸಾಂದ್ರತೆಗೆ ಅನುಗುಣವಾಗಿ ಗುರುತ್ವ ವ್ಯತ್ಯಾಸಗೊಳ್ಳುತ್ತದೆ. ಶಿಲೆಗಳಲ್ಲಿ ಸಾಂದ್ರತೆ ಏಕರೀತಿಯಾಗಿರುವುದೂ ಇಲ್ಲ. ಅಲ್ಲದೆ ಅವುಗಳಲ್ಲಿ ಹುದುಗಿರುವ ಭೂಜಲದ ಮೊತ್ತ ಸಹ ಅವುಗಳ ಸಾಪೇಕ್ಷಸಾಂದ್ರತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟು ಮಾಡಲು ಸಮರ್ಥವಾಗಿರುವ ಕಾರಣ ಇದು ಅಷ್ಟು ನಿಖರವಾದ ವಿಧಾನವೂ ಅಲ್ಲ. ಇದಕ್ಕೆ ತಗಲುವ ವೆಚ್ಚವೂ ದುಬಾರಿ. ಈ ಎಲ್ಲ ಕಾರಣಗಳಿಂದ ಇದು ಅಷ್ಟಾಗಿ ಬಳಕೆಯಲ್ಲಿಲ್ಲ. ಆದರೆ ಭೂಜಲ ನಿಕ್ಷೇಪಗಳಿಗೆ ಸಂಬಂಧಿಸಿದ ಕೆಲವು ವಿಶೇಷ ಭೂಲಕ್ಷಣಗಳನ್ನು ನಿರ್ಧರಿಸಲು ಇದು ಬಲು ಸಹಾಯಕ. ಜಲಧರಗಳ ವ್ಯಾಪ್ತಿಯನ್ನು ನಿರ್ಧರಿಸುವ ನೈಸರ್ಗಿಕ ಎಲ್ಲೆಗಳಾದ ಮೆಕ್ಕಲು ಮಣ್ಣಿನ ಸ್ತರಗಳು ಹಾಗೂ ನಿಕ್ಷೇಪಗಳು ಮತ್ತು ಅಗ್ನಿಶಿಲೆಯ ಅಂತಸ್ಸರಣಗಳು ಇವೇ ಮುಂತಾದ ಭೂಲಕ್ಷಣಗಳ ವಿನ್ಯಾಸವನ್ನು ತಿಳಿಯಲು ಸಾಧ್ಯವಾದೀತು. 

	6. ಕಾಂತ ವಿಧಾನ : ಇದು ಶಿಲೆಗಳ ಕಾಂತತ್ವವನ್ನು ಆಧರಿಸಿದೆ. ಈ ಗುಣ ಲೋಹಧಾತುಗಳಿಂದಾದ ಖನಿಜ ಹಾಗೂ ಶಿಲೆಗಳಲ್ಲಿ ಅಧಿಕ ಪ್ರಮಾಣದಲ್ಲೂ ಅಲೋಹ ಖನಿಜಗಳಿಂದಾಗಿ ಶಿಲೆಗಳಲ್ಲಿ ಅಲ್ಪಪ್ರಮಾಣದಲ್ಲೂ ಕಂಡುಬಂದಿದೆ. ಒಂದು ಭೂಭಾಗದಲ್ಲಿ ಹರಡಿರುವ ವಿವಿಧ ಶಿಲೆಗಳ ಕಾಂತಲಕ್ಷಣಗಳನ್ನು ನಿರ್ಧರಿಸಿ ಅವುಗಳ ಸಹಾಯದಿಂದ ಆ ಕ್ಷೇತ್ರದ ಕಾಂತನಕ್ಷೆಯನ್ನು ತಯಾರಿಸುತ್ತಾರೆ. ಆದರೆ ಈ ಮೌಲ್ಯಗಳ ಪ್ರಮಾಣದಲ್ಲಿ ಕಂಡುಬರುವ ವ್ಯತ್ಯಾಸಗಳಿಗೂ ಭೂಜಲಕ್ಕೂ ನಿಕಟ ಸಂಬಂಧವಿರದ ಕಾರಣ ಈ ವಿಧಾನ ಅಷ್ಟು ಉಪಯುಕ್ತವಾಗಿಲ್ಲ. ಆದರೂ ಈ ಭೂಜಲದ ಹರವನ್ನು ಅರಿಯಲು ಉಪಯುಕ್ತವಾಗುವ ಕೆಲವು ಭೂಲಕ್ಷಣಗಳನ್ನು ಈ ವಿಧಾನದಿಂದ ತಿಳಿಯಬಹುದು. ಉದಾಹರಣೆಗೆ, ಶಿಲಾ ಒಡ್ಡುಗಳು ಭೂಜಲದ ಚಲನೆಯನ್ನು ಅಡ್ಡಗಟ್ಟಿರುತ್ತವೆ. ಭೂಜಲಾಶಯಗಳ ನೈಸರ್ಗಿಕ ಎಲ್ಲೆಗಳಾದ ಈ ಒಡ್ಡುಗಳ ನಿರ್ಧಾರದಲ್ಲಿ ಇದು ಬಲು ಉಪಯುಕ್ತ. ಹಲವು ಪ್ರದೇಶಗಳಲ್ಲಿ ಲಾವಾಸ್ತರಗಳಿದ್ದು ಅವುಗಳ ವ್ಯಾಪ್ತಿಯನ್ನು ನಿರ್ಧರಿಸಿ ತನ್ಮೂಲಕ ಅಲ್ಲಿನ ಭೂಜಲ ನಿಕ್ಷೇಪದ ಎಲ್ಲೆಗಳನ್ನೂ ಗುರುತಿಸಲು ಸಾಧ್ಯವಾದೀತು. 

	7. ವಾಯು ಛಾಯಾಚಿತ್ರ ವಿಧಾನ : ವಿಮಾನಕ್ಕೆ ವಿಶೇಷ ರೀತಿಯ ಕೆಮರಾವನ್ನು ಅಳವಡಿಸಿ ಅಲ್ಪಕಾಲದಲ್ಲೇ 2580 ಚದರ ಕಿ.ಮೀಗಳಷ್ಟು ವಿಸ್ತಾರವಾದ ಭೂಪ್ರದೇಶದ ಛಾಯಾಚಿತ್ರಗಳನ್ನು ತೆಗೆದು ಅವನ್ನು ಅನುಕ್ರಮವಾದ ರೀತಿಯಲ್ಲಿ ಪರಸ್ಪರ ಜೋಡಿಸಿ ಬಲು ವಿಸ್ತಾರವಾದ ದೇಶದ ಇಡೀ ಭೂ ನಕಾಶೆಯನ್ನು ತಯಾರಿಸಲು ಸಾಧ್ಯವಾಗಿದೆ. ಇದಕ್ಕೆ ತಗಲುವ ವೆಚ್ಚ ಕೊಂಚ ಹೆಚ್ಚಾದರೂ ನಕಾಶೆಯಿಂದ ದೊರೆಯುವ ಭೂಮೇಲ್ಮೈಲಕ್ಷಣ ವಿವರಗಳು ಬಲು ಉತ್ತಮ ತೆರನಾಗಿದ್ದು ಇತರ ಯಾವ ವಿಧಾನದಿಂದಲೂ ಅಷ್ಟು ಶೀಘ್ರಗತಿಯಲ್ಲಿ ದೊರೆಯಲು ಸಾಧ್ಯವೇ ಇಲ್ಲ. ಈ ಬಗೆಯ ನಕಾಶೆಗಳಲ್ಲಿ ಮನುಷ್ಯ ನಿರ್ಮಿತ ವಿವರಗಳೇ ಅಲ್ಲದೆ ನೈಸರ್ಗಿಕ ಲಕ್ಷಣಗಳಾದ ಕಾಡುಗಳು ಹಾಗೂ ಸಸ್ಯ ವರ್ಗಗಳು ಹರಡಿರುವ ನಿರ್ದಿಷ್ಟ ಜಾಡುಗಳು, ಗುಡ್ಡಬೆಟ್ಟಗಳು, ಸರೋವರಗಳು ನದೀ ಪಾತ್ರಗಳು, ಮಳೆಯ ನೀರು ಹರಿಯುವ ಜಾಡುಗಳು, ವಿವಿಧ ಶಿಲಾಸಮೂಹಗಳು ಹಾಗೂ ಅವುಗಳ ವ್ಯಾಪ್ತಿ ಹೀಗೆ ಹಲವಾರು ವಿಶೇಷ ಭೂಮೇಲ್ಮೈ ಲಕ್ಷಣಗಳನ್ನೂ ಬಲು ನಿಖರವಾಗಿ ಗುರುತಿಸಲು ಸಾಧ್ಯವಾದೀತು. ಇವನ್ನು ಬಳಸಿಕೊಂಡು ಆಳದಲ್ಲಿ ಹುದುಗಿರುವ ಜಲವಾಹಕ ಶಿಲಾ ನಿಕ್ಷೇಪಗಳನ್ನು ಗುರುತಿಸಬಹುದು. ಹೀಗೆ ಆಯ್ಕೆ ಮಾಡಿದ ಪ್ರದೇಶಗಳಲ್ಲಿ ಪರೀಕ್ಷಾ ಕೊಳವೆ ಬಾವಿಗಳನ್ನು ತೋಡಿ ಇತರ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿ ಆ ನೆಲಭಾಗದಲ್ಲಿ ದೊರೆಯಬಹುದಾದ ಭೂಜಲದ ಮೊತ್ತವನ್ನು ಅಂದಾಜುಮಾಡಬಹುದು. ಹೀಗೆ ಮಾಡುವುದರಿಂದ ಹೆಚ್ಚು ಕಾಲ ಹಾಗೂ ಹಣ ವ್ಯಯವಾಗದೆ ಬಹು ಅಲ್ಪಕಾಲದಲ್ಲೇ ಭೂ ಜಲಾನ್ವೇಷಣೆಗೆ ಸಹಾಯಕವಾಗಬಲ್ಲ ಹೆಚ್ಚಿನ ವಿವರಗಳು ದೊರೆಯುತ್ತವೆ.
(ಬಿ.ಪಿ.ಜಿ.)

	8. ಜಲಭವಿಷ್ಯ ವಿಧಾನ : ಬಲು ಸರಳವಾಗಿರುವ ಸಲಕರಣೆಗಳನ್ನು (ಉದಾಹರಣೆಗೆ ತೂಗು ಗುಂಡು ಇಲ್ಲವೇ ಹಸುರು ಕಡ್ಡಿ) ಬಳಸಿಕೊಂಡು ಭೂಜಲದ ಇರವನ್ನು ಗುರುತಿಸುವ ವಿಧಾನವಿದು. ಕೇವಲ ಕೆಲವೇ ವ್ಯಕ್ತಿಗಳಿಗೆ ಈ ಸಾಮಥ್ರ್ಯವಿರುವುದರಿಂದ ಈ ವಿಧಾನವನ್ನು ಪೂರ್ಣವೈಜ್ಞಾನಿಕವಾಗಿ ವಿವರಿಸುವುದು ಇನ್ನೂ ಸಾಧ್ಯವಾಗಿಲ್ಲ. ಇದರಲ್ಲಿ ಅನುಸರಿಸುವ ಎರಡು ವಿಧಾನಗಳನ್ನು ಇಲ್ಲಿ ಬರೆದಿದೆ.

ತೂಗು ಗುಂಡಿನ ವಿಧಾನ : ಬಾವಿಗಳು ಬೇಕಾದ ಪ್ರದೇಶದಲ್ಲಿ ರೇಖಾಪಟವನ್ನು ಮೊದಲು ತಯಾರಿಸಬೇಕು, ಇಲ್ಲವೇ ಆ ಸರ್ವೆ ನಂಬರಿರುವ ನಕಾಸೆಯನ್ನು ತರಬೇಕು. ಒಂದು ಸಣ್ಣ ಹಿತ್ತಾಳೆ ಗುಂಡನ್ನು ಅಥವಾ ಚಿನ್ನದ ಉಂಗುರವನ್ನು ತೂಗುಗುಂಡಾಗಿ ಉಪಯೋಗಿಸಬೇಕು. ನಕಾಸೆಯ ಮೇಲೆ ಈ ಗುಂಡನ್ನು ತೂಗಿಸಿದರೆ ಅದು ತೂಗಲು ಪ್ರಾರಂಭಿಸುತ್ತದೆ. ಭೂಜಲ ಹರಿಯುವ ನಾಲೆಯ ಮೇಲೆ ತೂಗು ಗುಂಡಿನ ಆವರ್ತನೆ ದೊಡ್ಡದಾಗುತ್ತ ಹೋಗುತ್ತದೆಯೇ ಹೊರತು ಅದು ನಿಲ್ಲುವುದಿಲ್ಲ. ಸ್ವಲ್ಪ ಸ್ಥಳ ಬದಲಾವಣೆಯಾದರೆ ತೂಗು ಗುಂಡು ಸಣ್ಣ ವೃತ್ತಾಕಾರವಾಗಿ ತಿರುಗಲು ಪ್ರಾರಂಭಿಸಿ ಸಮೀಪದಲ್ಲಿ ಭೂಜಲ ಪ್ರವಾಹವಿದೆ ಎಂಬುದನ್ನು ತೋರಿಸುತ್ತದೆ. ಅಲ್ಲದೆ ರೇಖಾಪಟದ ಸೀಮೆ(ಹದ್ದುಬಸ್ತು) ಮೀರಿದರೆ ತೂಗು ಗುಂಡು ಭೂಜಲ ನಾಲೆಯ ಯಾವ ಸೂಚನೆಯನ್ನೂ ಕೊಡುವುದಿಲ್ಲ. ಒಂದು ವಿಚಿತ್ರವೆಂದರೆ ಈ ವಿಧಾನ ಕೇವಲ ಕೆಲವು ಜನರಿಗೆ ಮಾತ್ರ ಸಿದ್ಧಿಸುತ್ತದೆ. ಇವನ್ನು ಭೂಮಿಯ ಮೇಲೆ ಅಳವಡಿಸಿಕೊಳ್ಳಬಹುದು. ಆಗ ದೊಡ್ಡ ತೂಗು ಗುಂಡು ಬೇಕಾಗುತ್ತದೆ. ಕೊರೆ ಬಾವಿಗಳನ್ನು (ಬೋರ್ ವೆಲ್ಸ್) ಭೂಮಿಯ ಮೇಲೆ ನಿರ್ಧಿಷ್ಟವಾದ ಸ್ಥಳಗಳಲ್ಲಿ ಗುರುತಿಸಬೇಕಾದರೆ ತೂಗು ಗುಂಡಿನ ಕ್ರಮವನ್ನು ಅನುಸರಿಸಬೇಕು. ಭೂಪಟದ ಮೇಲೆ ಭೂಜಲ ಹರಿಯುವ ರೇಖೆಗಳನ್ನು ಅಂದರೆ ಮುಖ್ಯ ರೇಖೆಗಳನ್ನೂ ಉಪರೇಖೆಗಳನ್ನೂ ಗುರುತಿಸಿಕೊಂಡು ಬಳಿಕ ನೀರು ಅಧಿಕವಾಗಿ ಸಿಗುವ ಸ್ಥಳವನ್ನು ಗುರುತಿಸಬಹುದು. ಇಂಥ ಸ್ಥಳದಲ್ಲಿ ಬಾವಿಯನ್ನು ತೋಡಿದರೆ ಹೆಚ್ಚು ಪ್ರಯೋಜನವುಂಟು, ಆನಂತರ ಭೂಮಿಯ ಮೇಲೆ ಆ ನಿರ್ದಿಷ್ಟ ಸ್ಥಳವನ್ನು ಕವಲೊಡೆದ ಹಸಿರು ಕಡ್ಡಿಯ ಸಹಾಯದಿಂದ ಗುರುತಿಸಬಹುದು. 

	ಕವಲು ಹಸಿರು ಕಡ್ಡಿಯ ವಿಧಾನ: ಸಾಮಾನ್ಯವಾಗಿ ಇದರಲ್ಲಿ ಯಾವ ಹಸಿರು ಕಡ್ಡಿಯನ್ನಾದರೂ ಬಳಸಬಹುದು. ಆದರೆ ಬೇವಿನ ಕಡ್ಡಿ ಬಹಳ ಸೂಕ್ಷ್ಮ ಮತ್ತು ಬಳಸಲು ಬಲು ಸೂಕ್ತ. ಹಸಿರು ಕಡ್ಡಿಯ ಕವಲುಗಳು ಸಣ್ಣಗಿದ್ದು ಮೃದುವಾಗಿರಬೇಕು. ಕವಲುಗಳು ಸುಮಾರು 10-20 ಸೆಂ.ಮೀ. ಉದ್ದವಿರಬಹುದು. ಎರಡು ಕವಲುಗಳ ದಪ್ಪ ಒಂದೇ ಇರಬೇಕು, ಈ ವಿಧಾನದ ತತ್ತ್ವವನ್ನು ಪ್ರಾಯಶಃ ಹೀಗೆ ವಿವರಿಸಬಹುದು. ಹಸಿರು ಕಡ್ಡಿಯ ಒಳಗಿರುವ ಜೀವರಸದಲ್ಲಿ ಸೂಕ್ಷ್ಮ ರೂಪದ ಕಾಂತವಸ್ತುಗಳು ಇವೆ. ಮನುಷ್ಯ ಒಂದು ಸೆಕೆಂಡಿಗೆ ಸುಮಾರು 0.06 ವೋಲ್ಟಿನಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತಾನೆ. ಹಸಿರು ಕವಲನ್ನು ಎರಡು ಕೈಯಲ್ಲಿ ಹಿಡಿದುಕೊಂಡಾಗ ಈ ವಿದ್ಯುತ್ತು ಒಂದು ಕೈಯಿಂದ ಇನ್ನೊಂದು ಕೈಗೆ ಹಸಿರು ಕಡ್ಡಿಯ ಮೂಲಕ ಹರಿಯುತ್ತದೆ. ಆಗ, ಸೂಕ್ಷ್ಮ ರೂಪದಲ್ಲಿರುವ ಕಾಂತವಸ್ತುಗಳು ವಿದ್ಯುತ್ಕಾಂತ ವಸ್ತುಗಳಾಗಿ ತಮ್ಮದೇ ಆದ ರೀತಿಯಲ್ಲಿ ಮಿಡಿಯುತ್ತವೆ ಮತ್ತು ಪ್ರಭಾವ ಪ್ರದೇಶವನ್ನು ಏರ್ಪಡಿಸಿಕೊಳ್ಳುತ್ತವೆ. ಹರಿಯುವ ಭೂಜಲದಲ್ಲಿ ಸೂಕ್ಷ್ಮ ರೂಪದ ಕಾಂತವಸ್ತುಗಳಿರುತ್ತವೆ. ಇವು ಒಂದನ್ನೊಂದು ಉಜ್ಜಿದಾಗ ಸ್ಥಾಯೀ ವಿದ್ಯುತ್ತನ್ನು ಉತ್ಪಾದಿಸುತ್ತವೆ. ಆಗ ಈ ವಿದ್ಯುತ್ಕಾಂತ ವಸ್ತುಗಳು ತಮ್ಮ ಪ್ರಭಾವ ಪ್ರದೇಶವನ್ನು ಏರ್ಪಡಿಸಿಕೊಳ್ಳುತ್ತವೆ. ಈ ಪರಿಣಾಮದಿಂದ ಹಸಿರು ಕಡ್ಡಿ ಕೆಳಕ್ಕೆ ಇಲ್ಲವೇ ಮೇಲಕ್ಕೆ ವಿದ್ಯುತ್ ಪ್ರಭಾವ ಪ್ರದೇಶಗಳ ಮಿಡಿತಕ್ಕೆ ಅನುಗುಣವಾಗಿ ಬಾಗುತ್ತದೆ, ಹಸಿರು ಕಡ್ಡಿಯನ್ನು ಹಿಡಿದುಕೊಂಡು ನೀರು ಹರಿಯುವ ಮಾರ್ಗಕ್ಕೆ ಲಂಭಕೋನ ದಿಶೆಯಲ್ಲಿ ನಡೆದಾಗ ಕಡ್ಡಿ ಭೂಜಲ ಇರುವುದನ್ನು ಸೂಚಿಸುತ್ತ ಕೆಳಕ್ಕೆ ಇಲ್ಲವೆ ಮೇಲಕ್ಕೆ ಬಾಗುತ್ತದೆ. ಒಬ್ಬ ವ್ಯಕ್ತಿ ಕವಲು ಹಸಿರುಕಡ್ಡಿಯನ್ನು ಹಿಡಿದು ಭೂಜಲದ ಜಾಡಿನ ಮೇಲೆ ನಡೆದರೆ ಹಸಿರು ಕಡ್ಡಿ ಕೈಯಲ್ಲಿ ಸುತ್ತಲೂ ತಿರುಗುವುದಕ್ಕೆ ಪ್ರಾರಂಭಿಸುತ್ತದೆ. ಕಾರಣ ಅದು ವಿದ್ಯುತ್ಕಾಂತೀಯವಾಗಿ ವರ್ತಿಸಿ ಒಂದು ಧ್ರುವ ಕೆಳಕೂ ಮತ್ತೊಂದು ಧ್ರುವ ಮೇಲಕ್ಕೂ ಸೆಳೆಯುತ್ತದೆ. ಇದರ ಪರಿಣಾಮವಾಗಿ ಕಡ್ಡಿ ನಿರಂತರವಾಗಿ ತಿರುಗುತ್ತದೆ. ಕೆಲವು ವ್ಯಕ್ತಿಗಳು ಈ ವಿಧಾನದಿಂದ ಭೂಜಲ ಶೋಧನೆಗೆ ತೊಡಗಿ ಅವರ ಕೈಯಲ್ಲಿ ಹಸಿರುಕೋಲು ಉಂಟುಮಾಡುವ ಒತ್ತಡ ಮತ್ತು ನೀರು ನೆಲಸಿರುವ ಭೂಪದರದ ದಪ್ಪ ಇವುಗಳ ಆಧಾರದ ಮೇಲೆ ಯಾವ ಮೊತ್ತದಲ್ಲಿ ನೀರು ದೊರಕುತ್ತದೆ ಎಂಬುದನ್ನು ಊಹಿಸುತ್ತಾರೆ. ನೀರು ನೆಲೆಸಿರುವ ಭೂ ಪದರದ ಆದಿ ಹಾಗೂ ಅಂತ್ಯಗಳನ್ನು ತಿಳಿಯಬೇಕಾದರೆ ಭೂಜಲ ಪಾತ್ರದ ಮಧ್ಯಭಾಗ ಮತ್ತು ಪ್ರಭಾವ ವಲಯ ಪ್ರಾರಂಭವಾಗುವ ಸ್ಥಳಗಳನ್ನು ಭೂಮಿಯ ಮೇಲೆ ಗುರುತಿಸಿಕೊಳ್ಳಬೇಕು. ಹಸಿರುಕಡ್ಡಿ ಎಲ್ಲಿ ಅತ್ಯಂತ ಹೆಚ್ಚು ಬಾಗುತ್ತದೆಯೋ ಅದೇ ಭೂಜಲ ಪಾತ್ರದ ಮಧ್ಯಭಾಗ. ಇದನ್ನು ಇನ್ನೊಂದು ದಿಕ್ಕಿನಿಂದ ಬಂದು ಖಚಿತ ಮಾಡಿಕೊಂಡು ಭೂಮಿಯ ಮೇಲೆ ಗುರುತಿಸಬೇಕು. ಈ ಭೂ ಜಲ ಪಾತ್ರದ ಜಾಡಿಗೆ ಲಂಬ ಕೋನ ದಿಕ್ಕಿನಿಂದ ಹಸಿರುಕಡ್ಡಿಯನ್ನು ಹಿಡಿದು ನಡೆಯಬೇಕು. ಎಲ್ಲಿ ಪ್ರಭಾವ ವಲಯ ಪ್ರಾರಂಭವಾಗುತ್ತದೋ ಅಲ್ಲಿ ಹಸಿರುಕಡ್ಡಿ ಕೈಯಲ್ಲಿ ತಿರುಗಲು ಪ್ರಾರಂಭಿಸುತ್ತದೆ. ಈ ಜಾಗವನ್ನು ಮತ್ತೊಮ್ಮೆ ಪರೀಕ್ಷಿಸಿ ಗುರುತು ಮಾಡಬೇಕು. ಇವೆರಡು ಸ್ಥಳಗಳ ಅಂತರವನ್ನು ಪಟ್ಟಿಯಿಂದ ಅಳೆಯಬೇಕು. ಉದ್ದಳತೆಯ ಅರ್ಧದೂರದ ಜೊತೆಗೆ ಒಂದು ಮೀಟರನ್ನು ಸೇರಿಸಿದರೆ ಆಗುವ ದೂರವೇ ನೀರು ನೆಲೆಸಿರುವ ಪದರದ ಆಳ ಪ್ರಾರಂಭವಾಗುವ ಸ್ಥಳ, ಪೂರ್ತಿ ಉದ್ದಳತೆಯ ಜೊತೆಗೆ ಒಂದು ಮೀಟರನ್ನು ಸೇರಿಸಿದರೆ ಆಗುವ ದೂರವೇ ನೀರು ನೆಲೆಸಿರುವ ಪದರದ ಆಳದ ಅಂತ್ಯ. ಭೂಮಿಯ ಮೇಲೆ ಅಳೆದ ಉದ್ದಳತೆ ಮತ್ತು ಭೂಮಿಯ ಮೇಲಿಂದ ನೀರು ನೆಲೆಸಿರುವ ಆಳದ ಅಂತ್ಯ ಇವು ಲಂಬಕೋನ ತ್ರಿಕೋನದ ಸಮದ್ವಿಬಾಹುಗಳಂತೆ ಇರುವುದರಿಂದ ಈ ನಿಯಮವನ್ನು ಪ್ರತಿಪಾದಿಸಬಹುದು. ಭೂಜಲ ಪಾತ್ರದ ಎರಡು ಕಡೆಗೂ ಈ ನಿಯಮದಂತೆ ಭೂಜಲ ನೆಲೆಸಿರುವ ಪದರದ ಪ್ರಾರಂಭ ಮತ್ತು ಅಂತ್ಯ ಸ್ಥಳಗಳ ಆಳವನ್ನು ಕಂಡುಹಿಡಿಯಬೇಕು. ಇವು ಸಾಮಾನ್ಯವಾಗಿ ಒಂದೇ ಅಳತೆಯವು. ಒಳಪದರದಲ್ಲಿ ನಿಂತಿರುವ ನೀರು ಅಥವಾ ಜಿನುಗಿದ ನೀರು ಯಾವುದೇ ರೀತಿಯ ಸ್ಥಾಯೀ ವಿದ್ಯುತ್ತನ್ನು ಉತ್ಪಾದಿಸುವುದಿಲ್ಲ. ಇದರಿಂದ ಮೇಲೆ ಹೇಳಿದ ವಿಧಾನದಿಂದ ನಿಂತ ನೀರನ್ನು ಅಥವಾ ಜಿನುಗಿದ ನೀರನ್ನು ಗುರುತಿಸುವುದು ಸಾಧ್ಯವಿಲ್ಲ. ಇಂಥ ನೀರು ಸಾಮಾನ್ಯವಾಗಿ ಉಪ್ಪಾಗಿರುತ್ತದೆ. ಹರಿಯುವ ನೀರನ್ನು ಅಂದರೆ ಸಿಹಿ ನೀರನ್ನು ಮಾತ್ರ ಹಸಿರುಕಡ್ಡಿ ವಿಧಾನದಿಂದ ಗುರುತಿಸಬಹುದೇ ಹೊರತು ಉಪ್ಪು ನೀರನ್ನಲ್ಲ. ಈ ಬಗೆಯ ತಂತ್ರವನ್ನು ವೈಜ್ಞಾನಿಕವಾಗಿ ರುಜುವಾತು ಪಡಿಸಲಾಗಿಲ್ಲ. ಈ ತಂತ್ರದ ವೈಫಲ್ಯವೂ ಅಷ್ಟಾಗಿ ಸಾರ್ವಜನಿಕರ ಅರಿವಿಗೆ ಬರುವುದಿಲ್ಲ.
(ಟಿ.ಎಂ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ